ಪದವಿಪೂರ್ವ ಹಂತದಲ್ಲಿ ನೀವು ವಿಜ್ಞಾನ, ವಾಣಿಜ್ಯ ಅಥವಾ ಕಲೆ - ಇವುಗಳಲ್ಲಿ ಯಾವುದೇ ವಿಭಾಗವನ್ನು ಆಯ್ಕೆ ಮಾಡಿಕೊಂಡಿರಬಹುದು. ಈ ಪ್ರತಿಯೊಂದು ವಿಭಾಗದಲ್ಲಿಯೂ ನಿಮಗೆ ವಿದ್ಯಾಭ್ಯಾಸ ಮುಂದುವರೆಸಲು ಅಥವಾ ಬಯಸಿದ ವೃತ್ತಿಶಿಕ್ಷಣವನ್ನು ಪಡೆಯಲು ಹಲವಾರು ಮಾರ್ಗಗಳಿವೆ. ಪರೀಕ್ಷೆಯ ನಂತರ ಸಾಂಪ್ರದಾಯಿಕವಾದ ವೃತ್ತಿಪರ ಕೋರ್ಸ್‌ಗಳಿಗೆ ಹೋಗಬೇಕೆ ಇಲ್ಲವೇ ಬೇರಾವುದಾದರೂ ಕೋರ್ಸ್ ಸೇರಬೇಕೇ ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮುಂದೆ ಏಳಬಹುದು. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುವಾಗುವಂಥ ಕೆಲವು ಮಾಹಿತಿಯನ್ನು ಈಗ ಗಮನಿಸೋಣ
ವಿಜ್ಞಾನದ ವಿಭಾಗದಲ್ಲಿರುವ ಅವಕಾಶಗಳು
ನೀವು ವಿಜ್ಞಾನದ ವಿದ್ಯಾರ್ಥಿಗಳಾಗಿದ್ದಲ್ಲಿ ನಿಮಗೆ ಮುಂದಿನ ವಿದ್ಯಾಭ್ಯಾಸಕ್ಕೆ ವಿಪುಲವಾದ ಅವಕಾಶಗಳಿವೆ. ಇಂಜಿನಿಯರಿಂಗ್ ಕೋರ್ಸ್ ಬಹುಮಂದಿ ವಿದ್ಯಾರ್ಥಿಗಳ ಕನಸು. ಅದಕ್ಕಾಗಿ ಜೆಇಇ ಅಥವಾ ಸಿಇಟಿ ಪ್ರವೇಶಪರೀಕ್ಷೆಯನ್ನು ತೆಗೆದುಕೊಂಡು ಅದರಲ್ಲಿ ಬರುವ ರ್‍ಯಾಂಕಿಂಗ್‌ನ ಆಧಾರದ ಮೇಲೆ ವಿಷಯ ಹಾಗೂ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಬೇಕಾದ ಸಿದ್ಧತೆಯನ್ನು ನೀವು ಈಗಾಗಲೇ ಮಾಡಿಕೊಂಡಿರುತ್ತೀರಿ.
ಪದವಿಪೂರ್ವ ಹಂತದಲ್ಲಿ ನೀವು ಐಚ್ಛಿಕ ವಿಷಯಗಳಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದ ಜೊತೆಗೆ ಜೀವಶಾಸ್ತ್ರ (ಪಿಸಿಎಂಬಿ) ಅಥವ ಇಲೆಕ್ಟ್ರಾನಿಕ್ಸ್ (ಪಿಸಿ ಎಂಇ) ಅಥವಾ ಗಣಕವಿಜ್ಞಾನ (ಪಿಸಿಎಂಸಿಎಸ್) – ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡಿದ್ದರೂ ನಿಮಗೆ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರಲು ಅರ್ಹತೆ ಇದೆ. ಇಂಜಿನಿಯರಿಂಗ್ ಶಿಕ್ಷಣದ ಹೊರತಾಗಿ, ಇದೇ ಅರ್ಹತೆಯೊಂದಿಗೆ ಇನ್ನಾವ ಕೋರ್ಸ್‌ಗಳಿಗೆ ಸೇರಬಹುದೆಂಬುದನ್ನು ಗಮನಿಸೋಣ.
ಮೊದಲನೆಯದಾಗಿ, ನೀವು ಆಯ್ಕೆ ಮಾಡಿಕೊಂಡಿರುವ ಸಂಯೋಜನೆಯ ನಾಲ್ಕೂ ಐಚ್ಛಿಕ ವಿಷಯಗಳಿಗೆ ಸಂಬಂಧಿಸಿದಂತೆ ಪದವಿ (ಬಿ.ಎಸ್‌ಸಿ.) ವಿದ್ಯಾಭ್ಯಾಸವನ್ನು ಮುಂದುವರೆಸಬಹುದು. ಅಂದರೆ, ಪಿಸಿಎಂ ಅಥವಾ ಪಿಎಂಇ ಅಥವಾ ಪಿಎಂಸಿಎಸ್ ಸಂಯೋಜನೆಗಳಲ್ಲಿ ಪದವಿ ಪಡೆಯುವ ನಿಟ್ಟಿನಲ್ಲಿ ಯೋಚಿಸಬಹುದು. ಪದವಿಯ ನಂತರ ಸಂಯೋಜನೆಯಲ್ಲಿರುವ ಯಾವುದಾದರೊಂದು ವಿಷಯದಲ್ಲಿ ಸ್ನಾತಕೋತ್ತರ ಎಂಎಸ್‌ಸಿ ಅಧ್ಯಯನ ಮುಂದುವರೆಸಬಹುದು. ಆ ಮೂಲಕ ಪದವಿಪೂರ್ವ ಅಥವ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕ ವೃತ್ತಿಯನ್ನು ಹಿಡಿಯಬಹುದು. ಇಲ್ಲವೇ, ನೀವು ಅಧ್ಯಯನ ಮಾಡಿದ ವಿಷಯದಲ್ಲಿ ಸಂಶೋಧನೆಯನ್ನು ಕೈಗೊಂಡು ಡಾಕ್ಟರೇಟ್ ಪದವಿಯನ್ನು ಗಳಿಸಬಹುದು. ಇದು ನಿಮ್ಮ ಆಸಕ್ತಿಯನ್ನು ಅವಲಂಬಿಸಿರುತ್ತದೆ.
ಪದವಿಪೂರ್ವ ಹಂತದಲ್ಲಿ ಒಂದು ವೇಳೆ ನಿಮ್ಮ ಸಂಯೋಜನೆ ಪಿಸಿಎಂಬಿ ಆಗಿದ್ದಲ್ಲಿ, ಪದವಿ ಅಧ್ಯಯನಕ್ಕೆ ಜೀವಶಾಸ್ತ್ರದ ಆಧಾರವನ್ನು ಹೊಂದಿರುವ ಹಲವಾರು ಆಯ್ಕೆಗಳು ನಿಮ್ಮ ಮುಂದಿವೆ. ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರದಂತ ಶುದ್ಧ ವಿಜ್ಞಾನದ ಶಾಖೆಗಳಲ್ಲದೆ, ಆನ್ವಯಿಕ ಶಾಖೆಗಳಾದ ಮೈಕ್ರೋಬಯಾಲಜಿ, ಜೆನೆಟಿಕ್ಸ್, ಬಯೋಟೆಕ್ನಾಲಜಿ ಮುಂತಾದ ವಿಷಯಗಳನ್ನು ಹೊಂದಿರುವ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡು ಬಿಎಸ್‌ಸಿ ಪದವಿಗೆ ಅಧ್ಯಯನ ಮುಂದುವರೆಸಬಹುದು. ಮುಂದೆ, ಇವುಗಳಲ್ಲಿ ಯಾವುದಾದರೊಂದು ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಶಿಕ್ಷಣವನ್ನು ಪಡೆಯಬಹುದು. ಆನ್ವಯಿಕ ಶಾಖೆಗಳಲ್ಲಿ ಪದವಿ ಅಥವ ಸ್ನಾತಕೋತ್ತರ ಪದವಿ ಪಡೆದವರಿಗೆ ಉದ್ಯೋಗದ ಅವಕಾಶಗಳು ಇಂದು ಹೆಚ್ಚುತ್ತಿವೆ. ಸಂಶೋಧನೆಯ ಅವಕಾಶಗಳೂ ಸಾಕಷ್ಟಿವೆ.
ಪಿಯು ಹಂತದಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್‌ಗೆ ಸೇರುವುದೊಂದೇ ಆಯ್ಕೆಯಲ್ಲ. ಅದು ಎಲ್ಲರಿಗೂ ಸಾಧ್ಯವಾಗುವುದೂ ಇಲ್ಲ. ಅವರ ಮುಂದೆ ಇನ್ನೂ ಹಲವಾರು ವಿಶಿಷ್ಟ ಆಯ್ಕೆಗಳಿವೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ದಂತವೈದ್ಯಕೀಯ, ಹೋಮಿಯೋಪತಿ, ಆಯುರ್ವೇದ, ಯುನಾನಿ ಕೋರ್ಸ್‌ಗಳಿಗೂ ಸೇರುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಇಲ್ಲವೇ ಅಗ್ರಿಕಲ್ಚರ್, ವೆಟರ್ನರಿ, ಹಾರ್ಟಿಕಲ್ಚರ್, ಫಾರ್ಮಸಿ ಮುಂತಾದ ಕೋರ್ಸ್‌ಗಳನ್ನು ಸೇರುವ ಬಗ್ಗೆಯೂ ಯೋಚಿಸಬಹುದು. ಇಲ್ಲವೇ ಪ್ಯಾರಾ–ವೈದ್ಯಕೀಯ ಕೋರ್ಸ್‌ಗಳಾದ ನರ್ಸಿಂಗ್, ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಮುಂತಾದ ಕೋರ್ಸ್‌ಗಳಿಗೂ ಸೇರುವ ಸಾಧ್ಯತೆಯನ್ನು ಯೋಚಿಸಬಹುದು. ಈ ಕೇತ್ರಗಳಲ್ಲಿ ಪಿಯು ನಂತರ ಡಿಪ್ಲೊಮಾ ಅಧ್ಯಯನ ಮಾಡಿಯೂ ಉದ್ಯೋಗ ಗಳಿಸುವ ಸಾಧ್ಯತೆಗಳು ಹೆಚ್ಚಿವೆ.
ನಿಮ್ಮ ಆಯ್ಕೆಯ ಸಂಯೋಜನೆಯಲ್ಲಿ ರಸಾಯನಶಾಸ್ತ್ರವೂ ಒಂದಾಗಿದ್ದಲ್ಲಿ ಕೆಮಿಕಲ್ ಟೆಕ್ನಾಲಜಿ, ಸೆರಾಮಿಕ್ ಟೆಕ್ನಾಲಜಿ, ಟೆಕ್ಸ್‌ಟೈಲ್ ಟೆಕ್ನಾಲಜಿ, ಫುಡ್ ಟೆಕ್ನಾಲಜಿ ಮುಂತಾದ ಅಸಾಂಪ್ರದಾಯಿಕ ವಿಷಯಗಳಲ್ಲಿ ಬಿಟೆಕ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ, ಭೌತಶಾಸ್ತ್ರದಲ್ಲಿ ಬಯೋಫಿಸಿಕ್ಸ್, ಆಸ್ಟ್ರೋಫಿಸಿಕ್ಸ್, ನ್ಯೂಕ್ಲಿಯಾರ್ ಫಿಸಿಕ್ಸ್ ಮುಂತಾದ ವಿಶಿಷ್ಟ ವಿಷಯಗಳಲ್ಲಿ ಬಿಟೆಕ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಗಣಕ ವಿಜ್ಞಾದ ವಿಷಯದಲ್ಲೂ ಬಿಸಿಎ ಅಲ್ಲದೆ ಬಿಎಸ್‌ಸಿ(ಐಟಿ) ಪದವಿಯನ್ನೂ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು.
ಸಾಂಪ್ರದಾಯಿಕವಾದ ಬಿಎಸ್‌ಸಿ ಪದವಿಯ ನಂತರ ಬಿಎಡ್ ಶಿಕ್ಷಣ ನೀಡುವ ಕಾಲೇಜಿಗೆ ಸೇರಿ ಅಗತ್ಯ ತರಬೇತಿ ಪಡೆದು ಶಿಕ್ಷಕವೃತ್ತಿಗೆ ಸೇರುವ ಅವಕಾಶವನ್ನು ಸಹ ಪರಿಶೀಲಿಸಬಹುದು. ಇಷ್ಟಪಟ್ಟು ಶಿಕ್ಷಕವೃತ್ತಿಗೆ ಸೇರುವವರ ಸಂಖ್ಯೆ ಇಂದು ಕ್ಷೀಣಿಸುತ್ತಿದೆ.
ಹೀಗೆ, ವಿಜ್ಞಾನದ ಸಂಯೋಜನೆಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಬರಿಯ ಇಂಜಿನಿಯರಿಂಗ್ ಅಥವ ಮೆಡಿಕಲ್ ಕ್ಷೇತ್ರಗಳೇ ಅಲ್ಲದೆ ಬಹುವಿಧವಾದ ಆಯ್ಕೆಗಳು ಕಾಣಸಿಗುತ್ತವೆ.
ವಾಣಿಜ್ಯ ವಿಭಾಗದಲ್ಲಿರುವ ಅವಕಾಶಗಳು
ಪದವಿಪೂರ್ವ ಹಂತದಲ್ಲಿ ವಾಣಿಜ್ಯ ವಿಭಾಗದಲ್ಲಿ ಯಾವುದೇ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಾಂಪ್ರದಾಯಿಕವಾದ ಬಿಕಾಂ ಅಥವಾ ಬಿಬಿಎಂ ಪದವಿ ಕೋರ್ಸ್‌ಗೆ ಸೇರಿಕೊಳ್ಳುತ್ತಾರೆ.
ಅಂಥವರು ಬಿಕಾಂ ಪದವಿಯ ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಉದ್ಯೋಗ ಅಥವಾ ವೃತ್ತಿ ಹಿಡಿಯುವ ದೃಷ್ಟಿಯಿಂದ ಸಿಎ ಪರೀಕ್ಷೆ ತೆಗೆದುಕೊಳ್ಳಲು ಪೂರಕವಾದ ಸಿದ್ಧತೆಯನ್ನೂ ಮಾಡಿಕೊಳ್ಳಬಹುದು. ಇಲ್ಲವೇ ಬಿಕಾಂ ಅಥವ ಬಿಬಿಎಂ ಪದವಿಯ ನಂತರ ಉದ್ಯೋಗ ಪಡೆಯುವ ಪ್ರಯತ್ನವನ್ನು ಮಾಡಬಹುದು. ನೇರ ನೇಮಕಾತಿಯ ಅಂಥ ಅವಕಾಶಗಳು ಇಂದು ಬಹುವಾಗಿ ಹೆಚ್ಚಿವೆ. ಕೆಲವೆಡೆ ಮ್ಯಾನೇಜ್‌ಮೆಂಟ್, ಫೈನಾನ್ಸ್, ಟ್ಯಾಕ್ಸೇಷನ್, ಟೂರಿಸಂ ಮುಂತಾದ ವಿಶಿಷ್ಟ ವಿಷಯಗಳಲ್ಲಿ ಬಿಕಾಂ ಪದವಿ ನೀಡುವ ವಿದ್ಯಾಸಂಸ್ಥೆಗಳಿದ್ದು ಅಂಥ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸಬಹುದು. ವಾಣಿಜ್ಯ ವಿಷಯಗಳಲ್ಲಿ ಪದವಿ ಪಡೆಯುವವರ ಮುಂದಿರುವ ಇನ್ನೂ ಒಂದು ಆಯ್ಕೆ ಎಂದರೆ, ಎಂಕಾಂ ಅಥವಾ ಎಂಬಿಎ ಪದವಿಗೆ ಸೇರಿ ಸ್ನಾತಕೋತ್ತರ ಅಧ್ಯಯನ ಮುಂದುವರೆಸಬಹುದು. ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ಹಲವು ಬಗೆಯ ವಿಶಿಷ್ಟ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇರುತ್ತದೆ.
ವಿಜ್ಞಾನವಿಭಾಗದ ವಿದ್ಯಾರ್ಥಿಗಳಿಗಿರುವಷ್ಟು ವಿಧದ ಆಯ್ಕೆಗಳು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಇಲ್ಲವಾದರೂ ಉದ್ಯೋಗ ಹಾಗೂ ಸ್ವಾವಲಂಬನೆಯ ದೃಷ್ಟಿಯಿಂದ ಅವರ ಆಯ್ಕೆ ಸಮಂಜಸವೇ ಆಗಿರುತ್ತದೆ.
ಕಲಾ ವಿಭಾಗದಲ್ಲಿರುವ ಅವಕಾಶಗಳು
ಕಲಾ ವಿಭಾಗಕ್ಕೆ ಸಂಬಂಧಿಸಿದ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ತಮಗೆ ವೃತ್ತಿ ಅವಕಾಶಗಳು ಕಡಿಮೆ ಎಂಬ ತಪ್ಪು ನಂಬಿಕೆ ಇರುತ್ತದೆ. ಆದರೆ, ಅಂಥ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಂದುವರೆಸುವ ಅಥವಾ ವೃತ್ತಿ ಹಿಡಿಯುವ ಅವಕಾಶಗಳು ಸಾಕಷ್ಟಿವೆ. ಕಲಾ ವಿಭಾಗದ ವಿದ್ಯಾರ್ಥಿಗಳು ಯಾವುದೇ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರೂ ಅವರಿಗೆ ಬಿಎ ಪದವಿಗೆ ಸೇರುವ ಅರ್ಹತೆ ಇರುತ್ತದೆ. ಈ ಪದವಿಯಲ್ಲಿಯೂ ಹಲವು ಬಗೆಯ ಸಂಯೋಜನೆಗಳು ಲಭ್ಯವಿವೆ. ಅದರಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾದುದು ಜರ್ನಲಿಸಂ (ಪತ್ರಿಕೋದ್ಯಮ) ಒಂದು ವಿಷಯವಾಗಿರುವ ಸಂಯೋಜನೆ. ಇದೊಂದು ಉತ್ತಮವಾದ ಆಯ್ಕೆ. ಇದಲ್ಲದೆ, ಸೈಕಾಲಜಿ, ಎಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಸೋಷಿಯಲ್ ವರ್ಕ್, ಕ್ರಿಮಿನಾಲಜಿ, ಲೈಬ್ರರಿ ಸೈನ್ಸ್, ಟ್ರಾವೆಲ್ ಅಂಡ್ ಟೂರಿಸಂ ಮುಂತಾದ ಹಲವು ಬಗೆಯ ವಿಷಯಗಳು ಇವೆ. ಅವರವರ ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮುಂದುವರೆಸಬಹುದು.
ಬಿಎ ಪದವಿಯ ನಂತರ ಬಿಎಡ್ ಶಿಕ್ಷಣ ಪಡೆದು ಶಿಕ್ಷಕವೃತ್ತಿಗೆ ಆಯ್ಕೆಯಾಗಬಹುದು. ಇಲ್ಲವೇ ಪದವಿಯ ನಂತರ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಅವಕಾಶಗಳೂ ಮುಕ್ತವಾಗಿವೆ. ಅವಶ್ಯವೆನಿಸಿದಲ್ಲಿ ಮುಂದೆ ಸಂಶೋಧನಾ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಳ್ಳಬಹುದು.
ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ: ವಿದ್ಯಾರ್ಥಿಗಳೇ, ವಿಜ್ಞಾನ, ವಾಣಿಜ್ಯ ಮತ್ತು ಕಲೆ ಈ ಮೂರು ವಿಭಾಗಗಳಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆಯೇ ಏಳುವುದಿಲ್ಲ. ನಿಮ್ಮ ಆಸಕ್ತಿ ಹಾಗೂ ಸಾಮರ್ಥ್ಯಗಳೇ ನಿಜವಾದ ಅಳತೆಗೋಲು. ಈ ಮೂರೂ ವಿಭಾಗಗಳಲ್ಲಿ ಪದವಿಯ ನಂತರ ಎಂಬಿಎ ಮಾಡುವ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲ, ಯಾವುದೇ ಪದವಿ ಪಡೆದ ನಂತರ ಐಎಎಸ್, ಅಥವಾ ಕೆಎಎಸ್ ಮುಂತಾದ ನಾಗರಿಕ ಸೇವೆಯ ಪರೀಕ್ಷೆಯನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯುವ ಸಾಧ್ಯತೆಯನ್ನೂ ನೀವು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು.
ಪದವಿಪೂರ್ವ ಹಂತದ ನಂತರ ಒಂದು ವೇಳೆ ಯಾವುದೇ ವೃತ್ತಿಪರ ಅಥವಾ ಪದವಿ ಕೋರ್ಸಿಗೆ ಸೇರುವುದು ನಿಮಗೆ ಸಾಧ್ಯವಾಗಿಲ್ಲದೇ ಹೋದಲ್ಲಿ ಧೃತಿಗೆಡುವ ಅವಶ್ಯಕತೆ ಇಲ್ಲ. ಪಿಯು ನಂತರ ಮೂರೂ ವಿಭಾಗಗಳಲ್ಲಿ ಮಾಡಬಹುದಾದ ಹಲವಾರು ಡಿಪ್ಲೋಮಾ ಕೋರ್ಸ್‌ಗಳು ಲಭ್ಯವಿವೆ. ಆ ಸಾಧ್ಯತೆಗಳನ್ನೂ ಪರಿಶೀಲಿಸಿ.
ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ನಿಮ್ಮ ಕೈಯಲ್ಲೇ ಇದೆ. ಅಂತರ್ಜಾಲದ ಸಹಾಯವನ್ನು ಪಡೆದುಕೊಳ್ಳಿ. ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಪೋಷಕರೊಂದಿಗೆ, ಹಿತೈಷಿಗಳೊಂದಿಗೆ ಹಾಗೂ ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ. ಸೂಕ್ತ ನಿರ್ಧಾರಕ್ಕೆ ಬನ್ನಿ. ಅಂತಿಮ ತೀರ್ಮಾನ ನಿಮ್ಮದೇ ಇರಲಿ.
No comments:
Post a Comment